ಕಣಶಿಲೆಗಳು : ಭೂತೊಗಟೆಯನ್ನು ರಚಿಸಿರುವ ಮೂರು ಪ್ರಧಾನ ಶಿಲಾವರ್ಗಗಳ ಪೈಕಿ ಒಂದು (ಸೆಡಿಮೆಂಟರಿ ರಾಕ್ಸ್‌). ಉಳಿದ ಎರಡು ಪ್ರಧಾನ ವರ್ಗಗಳು ಅಗ್ನಿಶಿಲೆಗಳು ಮತ್ತು ರೂಪಾಂತರಿತ ಶಿಲೆಗಳು. ಕಣಶಿಲೆಗಳನ್ನು ಅವಸಾದನ ಶಿಲೆ, ಪದರು ಶಿಲೆ, ಜಲಜ ಶಿಲೆ ಎಂಬುದಾಗಿಯೂ ಕರೆಯುವುದುಂಟು. ಹೆಚ್ಚಿನ ಕಣಶಿಲೆಗಳು ಪದರ ಪದರವಾಗಿವೆ. ವಾಸ್ತವವಾಗಿ ಪದರಗಳು (ಇಲ್ಲವೇ ಪ್ರಸ್ತರೀಕರಣ) ಕಣಶಿಲೆಗಳ ಒಂದು ಮುಖ್ಯಲಕ್ಷಣ. ಭೂತೊಗಟೆಯ ಸರಾಸರಿ ದಪ್ಪ ಸು. 16 ಮೀ. ಇದರಲ್ಲಿ ಕಣಶಿಲೆಗಳು ಕೇವಲ ಶೇ. 5 ಮಾತ್ರ ಇವೆಯಷ್ಟೆ. ಆದರೆ ಮೇಲ್ಮೈಯ ತೆರೆದುಕೊಂಡಿರುವ ಪ್ರದೇಶದಲ್ಲಿನ ಶಿಲೆಗಳ ಪೈಕಿ ಶೇ. 75 ಕೂಡ ಕಣಶಿಲೆಗಳೇ. ಅಲ್ಲಿಗೆ ಭೂತೊಗಟೆಯ ತೀರ ಹೊರಕವಚದಲ್ಲಿ ಒಂದು ತೆಳು ಪದರವಾಗಿ ಕಣಶಿಲೆಗಳು ವ್ಯಾಪಿಸಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ಪದರದ ವಿತರಣೆ ಏಕರೀತಿ ಆಗಿದೆ ಎಂದೇನೂ ಭಾವಿಸಬೇಕಾಗಿಲ್ಲ. ಭೂಇತಿಹಾಸದ ಬೇರೆ ಬೇರೆ ಪ್ರಮುಖ ದಾಖಲೆಗಳನ್ನು ಸೆರೆಹಿಡಿದಿಟ್ಟಿರುವ (ಹೆಚ್ಚಾಗಿ ಫಾಸಿಲುಗಳ ರೂಪದಲ್ಲಿ) ಕಣಶಿಲೆಗಳು ವಿಜ್ಞಾನಿಗಳಿಗೆ ಅತ್ಯಂತ ಕುತೂಹಲಭರಿತ ಭೂಗ್ರಂಥಗಳಾಗಿವೆ. ಪ್ರಸ್ತರಗಳ ರಚನಾಯುಗವನ್ನು ನಿರ್ಣಯಿಸುವುದು ಸಾಧ್ಯ. ಆದ್ದರಿಂದ ಅವುಗಳಲ್ಲಿ ಲಿಖಿತವಾಗಿರುವ ಪಳೆಯುಳಿಕೆಗಳ ವಯಸ್ಸು ವೇದ್ಯವಾಗುವುದು: ಹೀಗಾಗಿ ಯಾವ ಯಾವ ಯುಗಗಳಲ್ಲಿ ಏನೇನು ಘಟನೆಗಳು ಸಂಭವಿಸಿದುವು ಎಂಬುದನ್ನು ಓದುವುದು ಸುಲಭ.

ಶಿಲೆಗಳು ಸಾಮಾನ್ಯವಾಗಿ ನಿರಂತರ ಶಿಥಿಲೀಕರಣಕ್ಕೆ ಒಳಗಾಗುತ್ತಿರುತ್ತವೆ. ಶಿಥಿಲೀಕರಿಸಿದ ಪ್ರದೇಶಗಳಿಂದ ಮಾರುತ, ನದಿ ಮುಂತಾದ ಕರ್ತೃಗಳಿಂದ ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಗೊಂಡು ಸರೋವರ-ಸಮುದ್ರಗಳ ತಳದಲ್ಲಿ ಅವು ಶೇಖರವಾಗುತ್ತವೆ. ನೀರಿನಲ್ಲಿ ವಿಲೀನಗೊಂಡ ಶಿಲಾಕಣ ಕ್ರಮೇಣ ಒಟ್ಟುಗೂಡಿ ಗಟ್ಟಿಯಾಗಿ ಹೊಸ ಶಿಲೆಗಳಾಗುತ್ತವೆ. ಇವೇ ಕಣಶಿಲೆಗಳು. ಇವನ್ನು ದ್ವಿತೀಯತೆ ಶಿಲೆಗಳು ಎಂದೂ ಕರೆಯುವುದುಂಟು. ಈ ಶಿಲಾವಸ್ತುಗಳು ಶೇಖರವಾದಾಗ ಕಣಗಳು ಬಿಡಿಯಾಗಿರುತ್ತವೆ. ಕಾಲಾನುಕ್ರಮದಲ್ಲಿ ಅವು ಸಂಘಟಿಸಿ ಗಟ್ಟಿಯಾಗುತ್ತವೆ. ಕಣಗಳ ಗಾತ್ರ ದಪ್ಪವಿದ್ದರೆ ಅವುಗಳ ಮಧ್ಯೆ ಬೇರೆ ವಸ್ತು ನಿಕ್ಷೇಪಿಸಿ, ಅವನ್ನೆಲ್ಲ ಬಂಧಿಸುತ್ತದೆ. ಶಿಲಾವಸ್ತುವು ನೀರಿನಲ್ಲಿ ವಿಲೀನವಾಗಿರುವ ಸಿಲಿಕ, ಸುಣ್ಣವಸ್ತು, ಮೆಗ್ನೀಸಿಯಮ್ ಮತ್ತು ಕೆಲವು ವೇಳೆ ಕಬ್ಬಿಣ ವಸ್ತು ಆಗಿರಬಹುದು. ಈ ರೀತಿ ರೂಪುಗೊಂಡ ಶಿಲೆಗಳಿಗೆ ಭೌತಕಣಶಿಲೆಗಳು ಎಂದು ಹೆಸರು. ಇವುಗಳಲ್ಲಿ ಪದರುರಚನೆ, ಪ್ರವಾಹ ಪದರು ರಚನೆ, ಅಲೆಗಳ ಗುರುತುಗಳು, ಒಣಗು ಬಿರುಕುಗಳು, ಪ್ರಾಣಿಗಳ ಜಾಡುಗಳು-ಈ ಮುಂತಾದ ಲಕ್ಷಣಗಳನ್ನು ಗುರುತಿಸಲಾಗಿದೆ.

ಕಣಗಾತ್ರವನ್ನು ಆಧಾರವಾಗಿಟ್ಟುಕೊಂಡು ಭೌತಕಣಶಿಲೆಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು.
1. ರುಡೇಸಿಯಸ್ : ಗುಂಡುಗಳು, ನೊರಜು, ಉರಟು ಮತ್ತು ಉಂಡೆ ಕಲ್ಲುಗಳು ಪ್ರಧಾನವಾಗಿರುವ ಶಿಲೆಗಳು. ಇವು ಸಿಲಿಕ, ಜೇಡು, ಸುಣ್ಣ ಅಥವಾ ಕಬ್ಬಿಣ ವಸ್ತುಗಳಿಂದ ಬಂಧಿತವಾಗಿ ಪೆಂಟೆಶಿಲೆಗಳು ಮತ್ತು ನೊರಜು ಶಿಲೆಗಳಾಗುತ್ತವೆ.
2. ಮರಳುಮಯ ಶಿಲೆ : ಮರಳು ಯಾವುದಾದರೊಂದು ವಸ್ತುವಿನಿಂದ ಬಂಧಿತವಾಗಿ ಆಗುವ ಶಿಲೆಗಳು, ಗ್ರೀಟ್, ಅರ್ಕೋಸ್ ಮತ್ತು ಗ್ರೆವೇಕ್ಗಳು ಈ ವರ್ಗದ ಶಿಲೆಗಳು. ಮರಳುಶಿಲೆಯ ಕಣಗಳು ದಪ್ಪವಿದ್ದು, ಚೂಪಾದ ಮೂಲೆಗಳಿದ್ದರೆ, ಆ ಶಿಲೆಗೆ ಗ್ರಿಟ್ ಎಂದು ಹೆಸರು. ಕಪ್ಪು ಮರಳುಶಿಲೆಗೆ ಗ್ರೆಮೆಕ್ ಎಂದು ಹೆಸರು.
3. ಮೆಕ್ಕಲು ಶಿಲೆಗಳು : ಗುಂಡು, ಮೆಕ್ಕಲು ಮುಂತಾದ ಶಿಲೆಗಳು ಈ ವರ್ಗಕ್ಕೆ ಸೇರಿದವು. ಇವು ಮರಳುಮಯ ಮತ್ತು ಮೃಣ್ಮಯಶಿಲಾ ವರ್ಗಗಳ ಮಧ್ಯಂತರ ಶಿಲೆಗಳು.
4. ಮೃಣ್ಮಯಶಿಲೆ ಅಥವಾ ಜೇಡುಶಿಲೆಗಳು : ಶಿಲಾಪುಡಿಯಿಂದ ಈ ಶಿಲೆಗಳಾಗುತ್ತವೆ. ಧೂಳು, ಮಣ್ಣು ಮತ್ತು ಜೇಡು-ಈ ವಸ್ತುಗಳು ಗಟ್ಟಿಯಾದಾಗ ಜೇಡು ಶಿಲೆಗಳಾಗುತ್ತವೆ.

ವಿಧಗಳು: ಉತ್ಪತ್ತಿಯ ಆಧಾರದ ಮೇಲೆ ಕಣಶಿಲೆಗಳನ್ನು ಮೂರು ಪ್ರಮುಖ ವಿಧಗಳಾಗಿ ವಿಂಗಡಿಸಬಹುದು. 1. ಭೌತಿಕ ಕ್ರಿಯೆಯಿಂದಾದ ಶಿಲೆಗಳು, 2. ರಾಸಾಯನಿಕ ಕ್ರಿಯೆಯಿಂದಾದ ಶಿಲೆಗಳು, 3. ಜೈವಿಕಾಂಶಗಳಿಂದಾದ ಶಿಲೆಗಳು.
1. ಭೌತಿಕ ಕ್ರಿಯೆಯಿಂದಾದ ಶಿಲೆಗಳು: ಇವು ಯಾಂತ್ರಿಕ ಕ್ರಿಯೆಗಳ ಪರಿಣಾಮದಿಂದ ಉತ್ಪತ್ತಿಯಾದವು. ಭೂಮೇಲ್ಮೈನ ಶಿಲೆಗಳು ನೈಸರ್ಗಿಕ ಕರ್ತೃಗಳ ಪ್ರಕ್ರಿಯೆಗಳಿಂದ ಶಿಥಿಲಗೊಂಡು ಉತ್ಪತ್ತಿಯಾದ ಶಿಲಾಕಣಗಳು ಸುಣ್ಣ, ಸಿಲಿಕ ಮತ್ತು ಖನಿಜಾಂಶಗಳಿಂದ ಬಂಧಿಸಲ್ಪಡುವುದರಿಂದಲೂ ಹಾಗೂ ಮೇಲ್ಸ್ತರದ ಭಾರದಿಂದ ಶಿಲೆಗಳಾಗಿ ಪರಿಣಮಿಸುವವು. ರಾಸಾಯನಿಕ ಕ್ರಿಯೆಗೊಳಪಡದೇ ಭೌತಿಕ ಕ್ರಿಯೆಗಳಿಂದ ಉತ್ಪತ್ತಿ ಯಾಗುವುದರಿಂದ ಇವುಗಳನ್ನು ಭೌತಿಕ ಕ್ರಿಯೆಯಿಂದಾದ ಶಿಲೆಗಳೆನ್ನುವರು. ಇವುಗಳಲ್ಲಿ ಮೂರು ವಿಧಗಳಿವೆ: (ಅ) ಮರಳುಮಯ ಶಿಲೆಗಳು(ಅರೆನಾಷಿಯಸ್ ರಾಕ್ಸ್‌),            (ಆ) ಮೃಣ್ಮಯ ಶಿಲೆಗಳು (ಆರ್ಜಿಲ್ಲಾಷಿಯಸ್ ರಾಕ್ಸ್‌), (ಇ) ರೂಡೇಷಸ್.
(ಅ) ಮರಳುಮಯ ಶಿಲೆಗಳು: ಮರಳು ಕಣಗಳು ಸಿಲಿಕೇಟ್ ಮತ್ತು ಸುಣ್ಣದಂತಹ ವಸ್ತುಗಳಿಂದ ಪರಸ್ಪರ ಬಂಧಿಸಲ್ಪಟ್ಟು ಗಟ್ಟಿಯಾಗಿ ಉತ್ಪತ್ತಿಯಾಗುವ ಶಿಲೆಗಳಿಗೆ ಮರಳುಮಯ ಶಿಲೆಗಳೆನ್ನುವರು. ಉದಾ: ಮರಳು ಶಿಲೆ. ಇವು ಪ್ರವೇಶ್ಯಶಿಲೆಗಳಾಗಿವೆ. ಇಂತಹ ಶಿಲೆಗಳು ಭಾರತದ ವಿಂಧ್ಯ ಮತ್ತು ಅರಾವಳಿ ಶ್ರೇಣಿಗಳಲ್ಲಿ ಹಾಗೂ ಒರಿಸ್ಸಾ, ಬಿಹಾರ ಮತ್ತು ಆಂಧ್ರ ಪ್ರದೇಶಗಳಲ್ಲಿ ಕಂಡುಬರುವವು.
(ಆ) ಮೃಣ್ಮಯ ಶಿಲೆಗಳು: ಸೂಕ್ಷ್ಮ ಮಣ್ಣಿನ ಕಣಗಳು ಹಾಗೂ ಖನಿಜ ವಸ್ತುಗಳಿಂದ ಉತ್ಪತ್ತಿಯಾದ ಶಿಲೆಗಳಿಗೆ ಮೃಣ್ಮಯ ಶಿಲೆಗಳೆನ್ನುವರು. ಉದಾ: ಜೇಡುಶಿಲೆ, ರೇವೆಗಲ್ಲು. ಇವು ಒತ್ತೊತ್ತಾದ ಕಣಗಳ ರಚನೆಯಿಂದ ಕೂಡಿದ್ದು ಅಪ್ರವೇಶ್ಯ ಶಿಲೆಗಳಾಗಿವೆ. ಇಂತಹ ಶಿಲೆಗಳು ಭಾರತದ ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒರಿಸ್ಸಾ, ಗುಜರಾತ್ ಹಾಗೂ ಕರ್ನಾಟಕಗಳಲ್ಲಿ ಕಂಡುಬರುತ್ತವೆ.
(ಇ) ರೂಡೇಷಸ್ ಶಿಲೆಗಳು: ಕಲ್ಲುಗುಂಡುಗಳು ಮತ್ತು ಕಲ್ಲುಹರಳುಗಳು ಪರಸ್ಪರ ಬಂಧಿಸುವಿಕೆ ಹಾಗೂ ಕ್ರೋಢಿಕರಣದಿಂದ ಉತ್ಪತ್ತಿಯಾದ ಶಿಲೆಗಳು. ಉದಾ: ಕಂಗ್ಲಾಮರೇಟ್ ಮತ್ತು ಬ್ರೇಸಿಯಾ. ವೃತ್ತಾಕಾರವುಳ್ಳ, ಗಾತ್ರದಲ್ಲಿ ದೊಡ್ಡದಾದ ಶಿಲಾಗುಂಡುಗಳು ಗಟ್ಟಿಯಾಗಿ ಬಂಧಿಸಲ್ಪಡುವುದರಿಂದ ಉತ್ಪತ್ತಿಯಾದ ಶಿಲೆಗಳನ್ನು ಕಂಗ್ಲಾಮರೇಟ್ ಎನ್ನುವರು. ಒರಟಾದ ಏಣುಗಳುಳ್ಳ ಶಿಲಾಚೂರುಗಳು ಪರಸ್ಪರ ಬಂಧಿಸಲ್ಪಟ್ಟು ಉತ್ಪತ್ತಿಯಾದ ಶಿಲೆಗಳಿಗೆ ಬ್ರೆಸಿಯಾ ಎನ್ನುವರು. ಇವು ಪ್ರವೇಶ್ಯ ಶಿಲೆಗಳಾಗಿರುತ್ತವೆ.

2. ರಾಸಾಯನಿಕ ಕ್ರಿಯೆಯಿಂದಾದ ಶಿಲೆಗಳು: ಸರೋವರ, ಸಮುದ್ರ-ಸಾಗರಗಳ ನೀರಿನಲ್ಲಿ ಹಲವು ದ್ರವ್ಯಗಳು ಕರಗುವವು. ಜಲಾಶಯಗಳು ಬತ್ತಿಹೋದ ಮೇಲೆ ಕರಗಿದ ವಸ್ತುಗಳು ತಳದಲ್ಲಿ ಸಂಚಯವಾಗುವವು. ಅವು ಕ್ರಮೇಣ ಶೇಖರಗೊಂಡು ಮರಳು ಮತ್ತು ರೇವೆ ಮಣ್ಣಿನ ಕಣಗಳ ಮಿಶ್ರಣವಾಗುವುದರೊಂದಿಗೆ ಶಿಲೆಗಳು ಉತ್ಪತ್ತಿಯಾಗುವವು. ಖನಿಜಾಂಶ ಮತ್ತು ಲವಣಯುಕ್ತ ಅಂತರ್ಜಲವು ಚಿಲುಮೆಯ ರೂಪದಲ್ಲಿ ಹೊರಬಂದು ಆವಿಯಾಗುವದರಿಂದಲೂ ಇಂತಹ ಶಿಲೆಗಳು ರಚನೆಯಾಗುವವು. ಉದಾ: ಉಪ್ಪು, ಜಿಪ್ಸಂ, ಡಾಲೋಮೈಟ್.

3. ಜೀವ್ಯಶೇಷಗಳಿಂದಾದ ಶಿಲೆಗಳು: ಪ್ರಾಣಿಗಳು ಮತ್ತು ಸಸ್ಯಗಳ ಅವಶೇಷಗಳಿಂದ ಉತ್ಪತ್ತಿಯಾದ ಶಿಲೆಗಳೇ ಜೀವ್ಯಶೇಷಗಳಿಂದಾದ ಶಿಲೆಗಳು. ಜೀವಿಗಳು ಅಳಿದ ನಂತರ ಅವುಗಳ ಅವಶೇಷಗಳು ಸಂಚಯನಗೊಳ್ಳುವವು. ಅವು ಕ್ರಮೇಣ, ಕ್ಯಾಲ್ಸಿಯಂ, ಸಿಲಿಕ, ಜೇಡಿ, ಮರಳು ಇತ್ಯಾದಿಗಳಿಂದ ಬಂಧಿಸಲ್ಪಟ್ಟು ಗಟ್ಟಿಯಾಗಿ ಶಿಲೆಗಳಾಗಿ ಪರಿಣಮಿಸುವವು. ಉದಾ: ಚಿಪ್ಪು, ಸುಣ್ಣ ಶಿಲೆ. ಸಂಯೋಜನೆಯನ್ನಾಧರಿಸಿ ಇವುಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. (ಅ) ಚೂರ್ಣಾಧಿಕ್ಯ ಶಿಲೆಗಳು (ಆ) ಇಂಗಾಲಾಧಿಕ್ಯ ಶಿಲೆಗಳು.
(ಅ) ಚೂರ್ಣಾಧಿಕ್ಯ ಶಿಲೆಗಳು: ಪ್ರಾಣಿಗಳ ಅವಶೇಷ ಮತ್ತು ರಾಸಾಯನಿಕ ಕ್ರಿಯೆಗಳ ಸಂಯೋಜನೆಯಿಂದ ಉತ್ಪತ್ತಿಯಾದವುಗಳಿಗೆ ಚೂರ್ಣಾಧಿಕ್ಯ ಶಿಲೆಗಳೆನ್ನುವರು. ಸಮುದ್ರ-ಸಾಗರಗಳಲ್ಲಿ ಜೀವಿಸುವ ಅಸಂಖ್ಯಾತ ಜಲಚರಗಳು ಲವಣಗಳನ್ನು ಸೇವಿಸಿ ತಮ್ಮ ಅಸ್ಥಿ ಮತ್ತು ಚಿಪ್ಪುಗಳನ್ನು ಬೆಳೆಸಿಕೊಂಡಿರುತ್ತವೆ. ಅವು ಅಳಿದ ಮೇಲೆ ಅಸ್ಥಿ ಮತ್ತು ಚಿಪ್ಪುಗಳು ಸಂಚಯನವಾಗಿ ಕ್ರಮೇಣ ಅವು ಅಂಟಿಕೊಂಡು ಶಿಲೆಗಳಾಗುತ್ತವೆ. ಇವುಗಳಲ್ಲಿ ಸುಣ್ಣದ ಅಂಶವು ಹೆಚ್ಚಾಗಿರುವ ಪ್ರಯುಕ್ತ ಚೂರ್ಣಾಧಿಕ್ಯ ಶಿಲೆಗಳೆನ್ನುವರು. ಉದಾ: ಸುಣ್ಣದ ಕಲ್ಲು ಮತ್ತು ಸೀಮೆಸುಣ್ಣ. ಇವು ಪ್ರವೇಶ್ಯ ಹಾಗೂ ಕರಗಬಲ್ಲ ಶಿಲೆಗಳು.
(ಆ) ಇಂಗಾಲಾಧಿಕ್ಯ ಶಿಲೆಗಳು: ಸಹಸ್ರಾರು ವರ್ಷಗಳ ಹಿಂದೆ ಗಿಡ-ಮರಗಳು ಭೂಮಿಯೊಳಗೆ ಹೂತು ಹೋಗಿದ್ದು, ಆಂತರಿಕ ಶಾಖ, ಒತ್ತಡ ಮತ್ತು ರಾಸಾಯನಿಕ ಕ್ರಿಯೆಗಳಿಂದ ಪರಿವರ್ತನೆಗೊಂಡು ಶಿಲೆಗಳಾಗಿ ಪರಿಣಮಿಸುವವು. ಅವುಗಳಲ್ಲಿ ಇಂಗಾಲಾಮ್ಲ ಹೆಚ್ಚಾಗಿರುತ್ತದೆ. ಆದ್ದರಿಂದ ಅವುಗಳನ್ನು ಇಂಗಾಲಾಧಿಕ್ಯ ಶಿಲೆ (ಕಾರ್ಬನೇಷಿಯಸ್ ರಾಕ್ಸ್‌) ಗಳೆಂದು ಕರೆಯುವರು. ಉದಾ: ಕಲ್ಲಿದ್ದಲು. ಭಾರತದ ದಾಮೋದರ, ಮಹಾನದಿ ಮತ್ತು ಗೋದಾವರಿ ನದಿ ಕಣಿವೆಗಳಲ್ಲಿ ಹಂಚಿಕೆಯಾಗಿವೆ. ಈ ಶಿಲೆಗಳು ಆರ್ಥಿಕವಾಗಿ ಬೆಲೆಯುಳ್ಳವು.

ಗುಣ ಲಕ್ಷಣಗಳು: ಈ ಶಿಲೆಗಳು ಭೂ ಮೇಲ್ಮೈಯಲ್ಲಿ ವ್ಯಾಪಕವಾಗಿ ಹರಡಿವೆ. ಸ್ಪಷ್ಟ ಪದರು ರಚನೆಯಿಂದ ಕೂಡಿದ್ದು, ಪಳೆಯುಳಿಕೆಗಳನ್ನು ಹೊಂದಿದೆ. ಇವು ಮೃದು ಮತ್ತು ಪ್ರವೇಶ್ಯ ಶಿಲೆಗಳಾಗಿವೆ. ಸುಲಭವಾಗಿ ಶಿಥಿಲೀಕರಣ ಹಾಗೂ ಸವೆತಕ್ಕೊಳಗಾಗುವವು. ವಿವಿಧ ಖನಿಜ ನಿಕ್ಷೇಪಗಳನ್ನೊಳಗೊಂಡಿವೆ. ಉದಾ: ಕಲ್ಲಿದ್ದಲು, ಪೆಟ್ರೋಲಿಯಂ, ಡಾಲೋಮೈಟ್ ಇತ್ಯಾದಿ. ಕಣ ಶಿಲೆಗಳು ಭೂಮೇಲ್ಭಾಗದಲ್ಲಿ ವ್ಯಾಪಕವಾಗಿ (ಶೇ. 75) ಹಂಚಿಕೆಯಾಗಿವೆ.

ಕರ್ನಾಟಕದಲ್ಲಿ ಕಣಶಿಲಾ ಹಂಚಿಕೆ : ಧಾರವಾಡ ಪದರ ಶಿಲೆಗಳು ಕರ್ನಾಟಕದಲ್ಲಿ ಅತ್ಯಂತ ಹಿಂದಿನ ಅಂದರೆ ಆರ್ಷೇಯ ಕಲ್ಪದ ಕಣಶಿಲೆಗಳು. ಇವು ಹನ್ನೊಂದು ವಲಯಗಳಲ್ಲಿ ರೂಪುಗೊಂಡಿವೆ: 1. ಕ್ಯಾಸಲ್ ರಾಕ್; 2. ಧಾರವಾಡ-ಶಿವಮೊಗ್ಗ; 3. ಗದಗ-ಡಂಬಾಲ್ ಅಥವಾ ಚಿತ್ರದುರ್ಗ- ಚಿಕ್ಕನಾಯಕನಹಳ್ಳಿ ನಾಗಮಂಗಲ; 4. ಸಂಡೂರು; 5. ಬಳ್ಳಾರಿ ಕುಷ್ಟಗಿ; 6. ಪೆನ್ನೇರ್-ಹಗ್ಗರಿ; 7. ಮಸ್ಕಿ-ಹಟ್ಟಿ; 8. ಬೊಮ್ಮನಾಳ್; 9. ಕೋಲಾರ;   10. ರಾಯಚೂರು ಮತ್ತು 11. ಗದ್ವಾಲ್. ಆದಿಜೀವಕಲ್ಪದ ಶಿಲೆಗಳು ಬೆಳಗಾಂವಿ ಜಿಲ್ಲೆಯಲ್ಲಿ ಬೆಳಗಾಂವಿ ನಗರಕ್ಕೂ ಕಾಲಡ್ಗಿಗೂ ಮಧ್ಯೆ ಹೊರಕಂಡಿವೆ. ಇವಕ್ಕೆ ಕಾಲಡ್ಗಿ ಶಿಲಾಶ್ರೇಣಿ ಎಂದು ಹೆಸರು. ಈ ಕಲ್ಪದ ಉತ್ತರಾರ್ಧಕಾಲದ ಶಿಲೆಗಳು ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಭೀಮಾನದಿಯ ಪಾತ್ರದಲ್ಲಿ ಸು. 7770 ಚ.ಕಿಮೀ. ಪ್ರದೇಶದಲ್ಲಿ ಹೊರಕಂಡಿವೆ. ಇವಕ್ಕೆ ಭೀಮಾ ಶಿಲಾಶ್ರೇಣಿ ಎಂದು ಹೆಸರು. ಇದರಲ್ಲಿರುವ ಸುಣ್ಣಶಿಲೆಗಳನ್ನು ಷಾಹಬಾದ್ ಸಿಮೆಂಟ್ ಕಾರ್ಖಾನೆಯಲ್ಲಿ ಉಪಯೋಗಿಸಲಾಗುತ್ತಿದೆ.

ಭಾರತ ಪರ್ಯಾಯ ದ್ವೀಪದ ಕಣಶಿಲೆಗಳ ಹಂಚಿಕೆ : ಈ ಪರ್ಯಾಯ ದ್ವೀಪ ಆರ್ಷೇಯ ಕಲ್ಪದ ಅನಂತರ ಸ್ಥಿರಭೂಭಾಗವಾಯಿತು. ಆದಿಜೀವಕಲ್ಪದ ಪುರ್ವಾರ್ಧದಲ್ಲಿ ಆಂಧ್ರಪ್ರದೇಶದ ಕಡಪ ಮತ್ತು ಕರ್ನೂಲ್ ಜಿಲ್ಲೆಗಳ ಪ್ರದೇಶ, ಒರಿಸ್ಸದ ಛತ್ತೀಸಗಢ ಪ್ರದೇಶ. ಕರ್ನಾಟಕದ ಬೆಳಗಾಂವಿ ಜಿಲ್ಲೆಯ ಕಾಲಡ್ಗಿ ಪ್ರದೇಶ ಮತ್ತು ದೆಹಲಿ ಪ್ರದೇಶಗಳನ್ನು ಸಮುದ್ರಗಳು ಆಕ್ರಮಿಸಿದ್ದುವು. ಈ ಪ್ರದೇಶಗಳಿಂದ ಸಮುದ್ರಗಳು ಹಿಂಜರಿದು ಉತ್ತರಾರ್ಧದಲ್ಲಿ ವಿಂಧ್ಯಪರ್ವತ ಪ್ರದೇಶ, ಕರ್ನೂಲ್ ಜಿಲ್ಲೆ ಮತ್ತು ಭೀಮಾ ನದಿಯ ಕಣಿವೆ ಪ್ರದೇಶಗಳನ್ನು ಪುನಃ ಆಕ್ರಮಿಸಿದುವು. ಈ ಪ್ರದೇಶಗಳಲ್ಲೆಲ್ಲ ಪಳೆಯುಳಿಕೆರಹಿತ ಕಣಶಿಲೆಗಳಿವೆ. ಪ್ರಾಚೀನ ಜೀವಕಲ್ಪವನ್ನು ಪ್ರತಿನಿಧಿಸುವ ಕಣಶಿಲೆಗಳು ಎಲ್ಲೂ ಸಂಚಯಿಸಿಲ್ಲ. ಮಧ್ಯ ಜೀವಕಲ್ಪದ ಜುರಾಸಿಕ್ ಯುಗದಲ್ಲಿ ಕಚ್ ಮುಂತಾದ ಪ್ರದೇಶಗಳು ಸಮುದ್ರಾಕ್ರಮಣಕ್ಕೊಳಗಾಗಿ ಅಲ್ಲಿ ಪಳೆಯುಳಿಕೆಗಳುಳ್ಳ ಕಣಶಿಲೆಗಳು ರೂಪುಗೊಂಡಿವೆ. ಕ್ರಿಟೇಷಸ್ ಯುಗದ ಮಧ್ಯಭಾಗದಲ್ಲಿ ಟೆತಿಸ್ ಸಾಗರ ನರ್ಮದಾ ಕಣಿವೆ ಪ್ರದೇಶದಲ್ಲೂ ದಕ್ಷಿಣ ಸಮುದ್ರ ತಿರುಚಿನಾಪಲ್ಲಿ, ವೃದ್ಧಾಚಲಮ್, ಪಾಂಡಿಚೇರಿ, ರಾಜ ಮಹೇಂದ್ರಿ ಮತ್ತು ಅಸ್ಸಾಮ್ ಪ್ರದೇಶಗಳಲ್ಲಿ ಆಕ್ರಮಣ ನಡೆಸಿದುವು. ಆಗ ಸಂಚಯಿಸಿದ ಶಿಲೆಗಳು ಆ ಪ್ರದೇಶಗಳಲ್ಲಿ ಕಂಡುಬರುತ್ತವೆ. ನವಜೀವಕಲ್ಪದ ಮಯೋಸೀನ್ ಯುಗದಲ್ಲಿ ಭಾರತ ಪರ್ಯಾಯದ್ವೀಪದ ಪುರ್ವ ಮತ್ತು ಪಶ್ಚಿಮತೀರಗಳಲ್ಲಿ ಸಮುದ್ರಾಕ್ರಮಣವಾಗಿ ಮರಳುಶಿಲೆಗಳು ನಿಕ್ಷೇಪವಾಗಿವೆ. ಇವುಗಳಲ್ಲಿ ಕಡಲೂರು ಮರಳುಶಿಲೆಗಳು ಗಮನಾರ್ಹ, ಕಾರ್ಬಾನಿಫೆರಸ್ ಯುಗದ ಅಂತ್ಯದಿಂದ ಜುರಾಸಿಕ್ ಯುಗದ ಅಂತ್ಯದವರೆಗೆ ಸೋನ್ದಾಮೋದರ್ ಮಹಾನದಿ ಮತ್ತು ಗೋದಾವರಿ ನದಿ ಕಣಿವೆಗಳಲ್ಲೂ ಪುರ್ವ ಮತ್ತು ಪಶ್ಚಿಮ ತೀರದ ಕೆಲವು ಸ್ಥಳಗಳಲ್ಲೂ ಸಿಹಿನೀರು ನಿಕ್ಷೇಪಗಳು ಸಂಚಯಿಸಿವೆ. ಇವಕ್ಕೆ ಗೊಂಡ್ವಾನ ಶಿಲಾಸಮುದಾಯ ಎಂದು ಹೆಸರು.
ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಕಣಶಿಲೆಗಳ ಹಂಚಿಕೆ: ಈ ಪ್ರದೇಶ ಇಯೊಸೀನ್ ಯುಗದ ಅಂತ್ಯದವರೆಗೆ ಟೆತಿಸ್ ಸಾಗರದ ಆಕ್ರಮಣಕ್ಕೊಳಗಾಗಿತ್ತು. ಆದ್ದರಿಂದ ಇಲ್ಲಿ ಶಿಲಾಪರಂಪರೆ ಸರಿಸುಮಾರು ಅಖಂಡವಾಗಿದೆ. ಸಿಂದ್-ಬಲೂಚಿಸ್ತಾನ್ ಪ್ರದೇಶ ಮತ್ತು ಅಸ್ಸಾಮ್ ಪ್ರದೇಶಗಳಲ್ಲಿ ಟೆತಿಸ್ ಸಾಗರ ಆಲಿಗೋಸೀನ್ ಯುಗದ ಅಂತ್ಯದವರೆಗೂ ಇದ್ದ ಕಾರಣ ಅಲ್ಲಿನ ಶಿಲಾಪರಂಪರೆ ಆಲಿಗೋಸೀನ್ ಯುಗವನ್ನೂ ಪ್ರತಿನಿಧಿಸುತ್ತದೆ. ಮಯೋಸೀನ್ ಯುಗದಿಂದ ವರ್ತಮಾನ ಕಾಲದವರೆಗೆ ಇಲ್ಲಿ ಸಿಹಿನೀರು ನಿಕ್ಷೇಪಗಳು ಸಂಚಯಿಸಿವೆ. ಶಿವಾಲಿಕ್ ಶಿಲಾಸಮುದಾಯ ಮತ್ತು ಸಿಂಧು-ಗಂಗ ಮೆಕ್ಕಲು-ಇವೇ ಈ ನಿಕ್ಷೇಪಗಳು.	(ಕೆ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ